ಭುವನೇಶ್ವರ
	ಭಾರತದ ಒರಿಸ್ಸ ರಾಜ್ಯದ ರಾಜಧಾನಿ.  ಪುರಿ ಜಿಲ್ಲೆಯ ಒಂದು ತಾಲ್ಲೂಕು.  ಜನಸಂಖ್ಯೆ 567.573 (1981) ಹಾಗೂ ಅದರ ಆಡಳಿತ ಕೇಂದ್ರ ನಗರ.  ಪುರಿಯ ಉತ್ತರದಲ್ಲಿ ಸುಮಾರು 48 ಕಿಮೀ ದೂರದಲ್ಲಿ ಕಲ್ಕತ್ತ-ಮದರಾಸು ರೈಲು ಮಾರ್ಗದಲ್ಲಿ ಸುಮಾರು 438 ಕಿಮೀ ದೂರದಲ್ಲಿದೆ.  ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರೇಕ್ಷಣೀಯ ನಗರ.  ಚಂದಿಘರ್ ಬಿಟ್ಟರೆ ಇದು ಎರಡನೆಯ ಯೋಜನಾಬದ್ಧ ನಿರ್ಮಾಣ ನಗರ.  ಜನಸಂಖ್ಯೆ 219.211 (1981).

	ದೇವಾಲಯಗಳ ನಗರವೆಂದು ಪ್ರಸಿದ್ಧವಾದ ಭುವನೇಶ್ವರ ಕಳಿಂಗನಾಡಿನ ವಾಸ್ತುಶಿಲ್ಪದ ಹುಟ್ಟು ಮತ್ತು ಅದರ ಪರಿಪೂರ್ಣ ಬೆಳೆವಣಿಗೆಯ ಗುರುತಾಗಿದೆ.  ಏಕಾಮ್ರತೀರ್ಥವೆಂದು ಮೊದಲು ಇದರ ಹೆಸರು.  ಒರಿಸ್ಸಾದ ಐದು ಧಾರ್ಮಿಕ ಕ್ಷೇತ್ರಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗಿದೆ.  ಹೀಗಾಗಿ ವರ್ಷದುದ್ದಕ್ಕೂ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ.  ವೀಕ್ಷಕರನ್ನು ಮುಗ್ಧರಾಗಿ ಮಾಡುವ ಇಲ್ಲಿರುವ ದೇವಾಲಯಗಳು ತಮ್ಮ ವಾಸ್ತುಶಿಲ್ಪ, ಶಿಲ್ಪಕಲೆ ಅವುಗಳ ನಿರ್ಮಾಣ ಕಲಾನೈಪುಣ್ಯಕ್ಕೆ ಪ್ರಸಿದ್ಧ.  ಕಲೆಯ ಆರಾಧಕರಿಗೆ ಮತ್ತು ಪಂಡತರಿಗೆ ಭುವನೇಶ್ವರ ಒಂದು ಮಹತ್ತ್ವದ ತಾಣ.

	ಭುವನೇಶ್ವರ ಮುಖ್ಯವಾಗಿ ದೇವಾಲಯಗಳ ಮತ್ತು ಕೆರೆ ಕೊಳಗಳ ನಗರ.  ಇಲ್ಲಿಯ ಲಿಂಗರಾಜು ದೇವಾಲಯ ಅನೇಕ ಕಿಲೊಮೀಟರ್ ದೂರದವರೆಗೆ ಕಾಣಿಸುತ್ತದೆ.  ಹಲವಾರು ದೇವಾಲಯಗಳು ಪಾಳು ಬಿದ್ದಿದ್ದರೂ ಆ ಕಾಲದ ಕಲೆ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತವೆ.  ದೇವಾಲಯ ನಿರ್ಮಾಣ ಕ್ರಿ.ಶ. ಏಳನೆಯ ಶತಮಾನದಲ್ಲಿ ಪ್ರಾರಂಭವಾಗಿದ್ದರೂ ಚರಿತ್ರೆ ಆದಕ್ಕೂ ಹಿಂದಿನದಾಗಿದೆ.  ಭಾರತದಲ್ಲಿ ಚಾರಿತ್ರಿಕ ಕಾಲದ ಆರಂಭದಿಂದ ಹಿಡಿದು ಹಿಂದೂ ಆಡಳಿತದ ಅಂತ್ಯದ ತನಕ ಸಂಬಂಧಿಸಿದ ಪ್ರಾಚ್ಯ ವಸ್ತು ಅವಶೇಷಗಳು ದೊರೆತಿರುವ ಹಲವೇ ಪಟ್ಟಣಗಳಲ್ಲಿ ಭುವನೇಶ್ವರವೂ ಒಂದು.  ಇಲ್ಲಿಗೆ ಸುಮಾರು 13 ಕಿಮೀ ದೂರದಲ್ಲಿರುವ ಧವಲಿ ಎಂಬ ಸ್ಥಳದಲ್ಲಿ ನಮ್ಮ ದೇಶದ ಮೊತ್ತಮೊದಲಿನ ಶಾಸನಗಳ ಪೈಕಿ ಒಂದಾದ ಅಶೋಕನ (ಕ್ರಿ.ಪೂ. 272-276) ಶಿಲಾಶಾಸನವಿದೆ.  ಅಶೋಕನ ಹದಿನಾಲ್ಕು ಕಲ್ಲಿನ ಶಾಸನಗಳ ಪೈಕಿ ಹನ್ನೊಂದನ್ನು ಇಲ್ಲಿ ಆನೆಯನ್ನು ಕೆತ್ತಿರುವ ಬಂಡೆಯ ಮೇಲೆ ಕಾಣಬಹುದು.  ಕಳಿಂಗ ಯುದ್ಧ ಗೆದ್ದ ವಿಷಯವನ್ನು ಪ್ರಚರಪಡಿಸುವ ಹದಿಮೂರನೆಯ ಶಾಸನ ಇಲ್ಲಿಯೂ ಇಲ್ಲ. 

ಗಂಜಾಮ್ ಜಿಲ್ಲೆಯ ಜೌಗಢದಲ್ಲಿಯೂ ಇಲ್ಲ.  ಕಳಿಂಗ ಯುದ್ಧದಲ್ಲಿ ಇಲ್ಲಿಯ ಜನ ಬಹಳ ಕಷ್ಟ ನಷ್ಟ ಮತ್ತು ಪ್ರಾಣಹಾನಿ ಅನುಭವಿಸಿದ್ದು ಒಂದು ಕಾರಣವಾಗಿ ಈ ಪ್ರಾಂತ್ಯದಲ್ಲಿ ತನ್ನ ದಿಗ್ವಿಜಯವನ್ನು ಸಾರುವ ಶಾಸನವನ್ನು ಕೆತ್ತಿಸಲು ಅಶೋಕ ಇಷ್ಟಪಡಲಿಲ್ಲವೆಂದು ಕಾಣುತ್ತದೆ. ಈ ಯುದ್ಧಾನಂತರ ಅಶೋಕ ಸಂಪೂರ್ಣ ಬದಲಾಗಿ ತನ್ನ ದಿಗ್ವಿಜಯದ ಮಹತ್ತ್ವಾಕಾಂಕ್ಷೆಯನ್ನು ನಿಲ್ಲಿಸಿ ಧರ್ಮವಿಜಯದ ಕಡೆ ತಿರುಗಿದ.  ಇಲ್ಲಿ ಹನ್ನೊಂದು, ಹನ್ನೆರಡು ಮತ್ತು ಹದಿಮೂರನೆಯ ಶಿಲಾಶಾಸನಗಳಿಗೆ ಬದಲಾಗಿ ಹೊಸದಾಗಿ ಗೆದ್ದ ರಾಜ್ಯದ ಪ್ರಜೆಗಳನ್ನು ಸಂತೈಸುವ ಸಂದೇಶವನ್ನು ಪ್ರಚಾರ ಮಾಡುವ ಎರಡು ವಿಶೇಷ ಶಿಲಾಶಾಸನಗಳಿವೆ.  ಈ ಶಾಸನಗಳಲ್ಲಿ ಎಲ್ಲ ಪ್ರಜೆಗಳು ನನ್ನ ಮಕ್ಕಳೇ ಎಂಬ ಹೇಳಿಕೆಯಿದೆ.  ಬುದ್ಧನನ್ನು ಸೂಚಿಸುವ ಇಲ್ಲಿಯ ಆನೆಯ ಮುಂಭಾಗದಲ್ಲಿರುವ ಚಿತ್ರ ತನ್ನ ಸಹಜ ಸ್ವರೂಪಕ್ಕೆ ಕಲೆಯ ನಿರೂಪಣೆಗೆ ಮತ್ತು ಆಕಾರಕ್ಕೆ ಹೆಸರಾಗಿದ್ದು ಒರಿಸ್ಸದಲ್ಲಿ ಅಸ್ತಿತ್ವಕ್ಕೆ ಬಂದ ಮೊತ್ತಮೊದಲನೆಯ ಚಿತ್ರವೆನಿಸಿದೆ. 

	ಭೌಮಕರ ವಂಶದ ದೊರೆ ಶಾಂತಿಕರನ ಆಡಳಿತದಲ್ಲಿ ಒಂದು ಚಿಕ್ಕಮಠವನ್ನು ಧೌಲಿಯಲ್ಲಿ ಅಶೋಕನ ಶಾಸನಕ್ಕೆ ವಾಯವ್ಯದಿಕ್ಕಿನಲ್ಲಿ ನಿರ್ಮಿಸಿದುದಾಗಿ ಒಂದು ಶಾಸನ ಹೇಳುತ್ತದೆ.  ಅಲ್ಲದೆ ಅಲ್ಲಿಯ ಬೆಟ್ಟದ ಮೇಲಿರುವ ಭೌಮಕರ ಕಾಲದ ದೇವಾಲಯದ ಅವಶೇಷಗಳೂ ಮತ್ತು ಧೌಲಿ ಬೆಟ್ಟದ ಬುಡದಲ್ಲಿರುವ ಮಧ್ಯ ಕಾಲೀನ ದೇವಾಲಯಗಳೂ ಗುರುತುಗಳಾಗಿ ಅಲ್ಲಿ ಉಳಿದಿವೆ.  ಅಶೋಕನ ಶಿಲಾ ಶಾಸನದಿಂದ ತೋಶಾಲಿ ಆಗ ಸಾಮಂತರಾಜರ ಸ್ಥಾನವಾಗಿದ್ದಿತೆಂದು ಊಹಿಸಬಹುದು.  ಭುವನೇಶ್ವರ-ಪೂರಿ ರಸ್ತೆಯ ಎಡಕ್ಕೆ ಧೌಲಿಯಿಂದ ಈಶಾನ್ಯಕ್ಕೆ ಐದು ಕಿಲೊಮೀಟರ್ ಮತ್ತು ಭುವನೇಶ್ವರದಿಂದ ಆಗ್ನೇಯಕ್ಕೆ ಎರಡೂವರೆ ಕಿಲೊಮೀಟರ್ ದೂರದ ಶಿಶುಪಾಲಗಢದಲ್ಲಿ ವಿಶಾಲವಾದ ಒಂದು ಕೋಟೆಯ ಅವಶೇಷಗಳು ಈಚಿನ ಉತ್ಖನನದಿಂದ ಬೆಳಕಿಗೆ ಬಂದಿವೆ.  ಇಲ್ಲಿ ಹರಿಯುವ ಗಂಗುವ (ಪುರಾತನ ಗಂಧವತಿ) ನದಿ ಈ ಕೋಟೆಯನ್ನು ಸುತ್ತಲೂ ಆವರಿಸಿದೆ. 

	ಭುವನೇಶ್ವರದಲ್ಲಿ ಗುಪ್ತರ ಕಾಲದ ದೇವಾಲಯಗಳಿಲ್ಲದಿದ್ದರೂ ಕೆಲವು ವಿಗ್ರಹಗಳಲ್ಲಿ ಗುಪ್ತರ ಕಾಲಕ್ಕೆ ಸೇರಿದವುಗಳ ಹೋಲಿಕೆಯಿದೆ ಎಂದು ಹೇಳುತ್ತಾರೆ.  ಮುಂದೆ ಉತ್ತರ ಹಿಂದೂಸ್ಥಾನದ ನಾಗರ ಶೈಲಿ ಕಳಿಂಗ ಶೈಲಿಯೆಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದಿತು.  ಹನ್ನೆರಡನೆಯ ಶತಮಾನದ ತನಕ ಇಲ್ಲಿಯ ವಾಸ್ತುಶಿಲ್ಪದ ಬೆಳೆವಣಿಗೆ ಶೈವ ಮತ್ತು ಶಾಕ್ತ ಧರ್ಮ ಅನುಸರಿಸಿಯೇ ಮುಂದುವರಿದು ಹದಿಮೂರನೆಯ ಶತಮಾನದಲ್ಲಿ ವೈಷ್ಣವಧರ್ಮಕ್ಕೆ ಎಡೆಮಾಡಿಕೊಟ್ಟಿತು. 

	ಏಕಾಮ್ರತೀರ್ಥ ಪುರಾಣದಲ್ಲಿ ನಮೂದಿಸಿರುವಂತೆ ಹಾಗೂ ಕೆಲವು ಶಾಸನಗಳಲ್ಲಿರುವಂತೆ ಶಿವಧರ್ಮಪರಾಯಣನಾದ ಶಶಾಂಕ ಕೊಂಗಡದ ಸಮೇತ ಒರಿಸ್ಸದ ಕೆಲವು ಭಾಗಗಳನ್ನು ಏಳನೆಯ ಶತಮಾನದಲ್ಲಿ ಗೆದ್ದು ತ್ರಿಭುವನೇಶ್ವರದಲ್ಲಿ ಮೊತ್ತಮೊದಲನೆಯ ಶಿವದೇವಾಲಯ ನಿರ್ಮಿಸಿದನೆಂಬುದರಲ್ಲಿ ಸ್ವಲ್ಪ ಮಟ್ಟಿನ ನಿಜಾಂಶವಿದ್ದರೂ ಶಿವಪ್ರಚಾರಕನಾದ ಲಕುಲೀಶನಿಂದ ಸ್ಥಾಪಿತವಾದ ಪಾಶುಪತ ಧರ್ಮ ಇಲ್ಲಿ ಧರ್ಮದ ಬದಲಾವಣೆಗೂ ದೇವಾಲಯಗಳ ನಿರ್ಮಾಣಕ್ಕೂ ಒಂದು ಹುರುಪನ್ನು ಕೊಟ್ಟಿತು.  ಈ ಪ್ರದೇಶದಲ್ಲಾಗಲೇ ಬೌದ್ಧಧರ್ಮ ನೆಲೆಗೊಂಡಿತ್ತೆನ್ನುವುದು ವೈತುಲ ದೇವುಲ ದೇವಾಲಯದ ಮುಂದಿರುವ ಯೂಪ ಸ್ತಂಭದ ಮೇಲಿರುವ ಬುದ್ಧವಿಗ್ರಹಗಳಿಂದ ತಿಳಿದುಬರುವುದು. 

	ಕ್ರಿ.ಶ. ಏಳನೆಯ ಶತಮಾನದ ಆದಿಭಾಗದಲ್ಲಿ ಗೌಡ ದೊರೆ ಶಶಾಂಕನ ಸಾಮಂತರಾಜರುಗಳಾದ ಶೈಲೋದ್ಭವರು ಇಲ್ಲಿ ಮೊದಲ ಬಾರಿಗೆ ದೇವಾಲಯಗಳ ನಿರ್ಮಾಣ ಮಾಡಿದರೆಂದು ಹೇಳಬಹುದು.  ಅದರಲ್ಲಿ ಪರಶುರಾಮೇಶ್ವರ ದೇವಾಲಯ ಬಹಳ ಒಳ್ಳೆಯ ರೀತಿಯಲ್ಲಿ ಉಳಿದುಬಂದಿದೆ.  ಕ್ರಿ.ಶ. 619ರ ಶಶಾಂಕನ ಗಂಜಾಮ್ ತಾಮ್ರ ಶಾಸನದಂತೆ ಅವನು ಎರಡನೆಯ ಮಾಧವರಾಜನ ಕೈಕೆಳಗೆ ಸ್ವಾತಂತ್ರ್ಯ ಘೋಷಿಸಿದ. 

	ಭೌಮಕರರ ಕಾಲದ ದೇವಾಲಯಗಳ ನಿರ್ಮಾಣ ವಿಷಯವನ್ನು ಯಾವ ಶಾಶನಗಳೂ ತಿಳಿಸದೇ ಇದ್ದರೂ ಅವರ ಕಾಲದಲ್ಲಿ ದೇವಾಲಯಗಳ ನಿರ್ಮಾಣ ಯಾವ ಅಡೆ ತಡೆಗಳೂ ಇಲ್ಲದೆ ಮುಂದುವರಿದಿದ್ದುವೆಂದು ಹೇಳಬಹುದು.  ಭೌಮಕರರಾದ ಮೇಲೆ ಸೋಮವಂಶೀಯರು ರಾಜ್ಯಭಾರಕ್ಕೆ ಬಂದರು.  ಬ್ರಹ್ಮೇಶ್ವರ ದೇವಾಲಯವನ್ನು ಉದ್ಯೋತಕೇಸರಿ (11ನೆಯ ಶತಮಾನ) ರಾಜನಾದ ಮೇಲೆ 18ನೆಯ ವರ್ಷದಲ್ಲಿ ಕಟ್ಟಸಿದನೆಂದು ಒಂದು ಶಾಸನ ತಿಳಿಸುತ್ತದೆ. 

	ಕಳಿಂಗದ ಪೂರ್ವ ಗಂಗಮನೆತನದ ಅರಸರ ಕಾಲದಲ್ಲಿ 12ನೆಯ ಶತಮಾನ ದೇವಾಲಯಗಳ ನಿರ್ಮಾಣ ಕಾರ್ಯ ಮುಂದುವರಿಯಿತು.  ಲಿಂಗರಾಜ ದೇವಾಲಯದ ಜಗಮೋಹನ ಗೋಡೆ ಮೇಲಿರುವ ಒಂದು ಶಾಸನ ಅನಂತವರ್ಮ ಚೋಡಗಂಗ (1078-1150) ಕೃತ್ತಿವಾಸ (ಲಿಂಗರಾಜ) ದೇವಾಲಯದಲ್ಲಿ ದೀಪ ಹಚ್ಚಲು ಒಂದು ಹಳ್ಳಿಯನ್ನು 1114-15ರಲ್ಲಿ ದಾನವಾಗಿಕೊಟ್ಟನೆಂದು ತಿಳಿಸುತ್ತದೆ.  ಇದರಿಂದ ಅನಂತವರ್ಮ ಚೋಡಗಂಗ 1114-15ಕ್ಕೆ ಮುಂಚೆ ಈ ರಾಜ್ಯವನ್ನು ಗೆದ್ದಿದ್ದನೆಂದೂ ದೇವಾಲಯ ಈ ಸಮಯದಲ್ಲಿ ಅಸ್ತಿತ್ವದಲ್ಲಿದ್ದಿತೆಂದೂ ತಿಳಿದುಬರುತ್ತದೆ. ಹಲವು ದೇವಾಲಯಗಳಲ್ಲಿ ಗಂಗರಸರ ಶಾಸನಗಳಿದ್ದು ಅವು ದೇವಾಲಯಗಳ ನಿರ್ಮಾಣಕಾಲವನ್ನು ಸೂಚಿಸುತ್ತವೆ.  ಉದಾಹರಣೆಗೆ ಮೋಘೇಶ್ವರ ದೇವಾಲಯವನ್ನು ಎರಡನೆಯ ಅನಂಗ ಭೀಮನ ಕಾಲದಲ್ಲಿ 12ನೆಯ ಶತಮಾನದ ಕೊನೆಯಲ್ಲಿ ಸ್ವಪ್ನೇಶ್ವರ ನಿರ್ಮಿಸಿದನೆಂದು ತಿಳಿದುಬರುತ್ತದೆ.  ಮತ್ತು ಅನಂತವಾಸುದೇವ ದೇವಾಲಯವನ್ನು 1278ರಲ್ಲಿ ಮೂರನೆಯ ಅನಂಗ ಭೀಮನ ಮಗಳಾದ ಚಂದ್ರಾದೇವಿ ನಿರ್ಮಿಸಿದಳೆಂದು ತಿಳಿದುಬರುತ್ತದೆ.  ಈ ಕಾಲದಲ್ಲಿ ವೈಷ್ಣವಧರ್ಮ ಪ್ರವರ್ಧಮಾನಕ್ಕೆ ಬಂದು ಲಿಂಗರಾಜದೇವಾಲಯದ ದೇವರನ್ನು ಹರಿಹರ ಎಂದು ಗುರುತಿಸಬೇಕೆಂದು ಮಾಡಿದುದೇ ಅಲ್ಲದೆ ಭೋಗ ಮಂಟಪದ ಎದುರುಗಡೆ ನಂದಿಯ ಜೊತೆಯಲ್ಲಿ ಗರುಡನನ್ನು ಪ್ರತಿಷ್ಠಸಿ ವೈಷ್ಣವ ಧರ್ಮದ ಪೂಜಾವಿಧಾನಗಳನ್ನೂ ಜಾರಿಗೆ ತಂದರು.

	ಗಂಗರಸರ ಅನಂತರ ಬಂದ ಗಜಪತಿಗಳ ಕಾಲದಲ್ಲಿ ದೇವಾಲಯಗಳ ನಿರ್ಮಾಣ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ ಬಹುಶಃ ವರುಣೇಶ್ವರ ದೇವಾಲಯ ಮತ್ತು ಪಾಪನಾಶಿನಿ ಕೆರೆಯನ್ನು ಇವರು ನಿರ್ಮಿಸಿರಬಹುದು.  ಪಾಪನಾಶಿನಿ ಕೆರೆಯ ದಂಡೆಯ ಪಕ್ಕದಲ್ಲಿರುವ ಆರನೆಯ ಸಾಲಿನ ಬಂಡೆಯ ಮೇಲೆ ಗಜಪತಿ ಮನೆತನದ ಮೊದಲನೆಯ ರಾಜ ಕಪಿಲೇಂದ್ರನ (1435-70) ಹೆಸರಿದೆ.

	ಇಲ್ಲಿಯ ದೇವಾಲಯಗಳನ್ನು ಕಳಿಂಗ ವಾಸ್ತುಶಿಲ್ಪದ ಪ್ರಕಾರ ಮೂರು ಭಾಗಗಳಾಗಿ ವಿಂಗಡಿಸಬಹುದು.  ರೇಖಾ, ಪೀಡಾ ಮತ್ತು ಖಾಖಾರ.  ಲಾಕ್ಷಣಿಕವಾದ ಒರಿಸ್ಸಾ ದೇವಾಲಯದಲ್ಲಿ ಮೊದಲೆರಡು ರೀತಿಯ ವಿನ್ಯಾಸಗಳು ಒಂದರ ಜೊತೆಗೂಡಿ ಒಂದು ಇದ್ದು ವಾಸ್ತುಶಿಲ್ಪದ ವೃತ್ತದಲ್ಲಿ ಒಂದೇ ವಿಧವಾಗಿರುತ್ತವೆ.

	ಖಾಖಾರ ದೇವಾಲಯಗಳ ವಿನ್ಯಾಸ ಅಗಲಕ್ಕಿಂತ ಉದ್ದ ಹೆಚ್ಚಾಗಿರುವ ಚತುರಸ್ರವಾದವು.

	ಸಾಮಾನ್ಯವಾಗಿ ಒರಿಸ್ಸದ ದೇವಾಲಯಗಳು ಮರಳು ಕಲ್ಲಿನಿಂದ ಕಟ್ಟಲ್ಪಟ್ಟವು.  ಉದಯಗಿರಿ ಮತ್ತು ಖಂಡಗಿರಿಗಳಲ್ಲಿ ಈ ಕಲ್ಲು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ.  ಇಲ್ಲಿ ಗಾರೆಯನ್ನು ಉಪಯೋಗಿಸದೆ ಬಂಡೆಗಳ ಭಾರವನ್ನೇ ಉಪಯೋಗಿಸಿಕೊಂಡು ಮತ್ತು ಕಬ್ಬಿಣದ ಕಟ್ಟಡಗಳನ್ನು ನಿರ್ಮಿಸಲಾಗಿದೆ.  ದೇವಾಲಯಗಳ ಹೊರಭಾಗಗಳು ಶಿಲ್ಪಗಳನ್ನೂ ಚಿತ್ರಗಳನ್ನೂ ಒಳಗೊಂಡಿವೆ.  ಭಿತ್ತಿಪಟ್ಟಿಕೆಗಳಲ್ಲಿ ಹಲವು ರೀತಿಯ ಶಿಲ್ಪಗಳನ್ನು ಬಿಡಿಸಲಾಗಿದೆ.  ಧರ್ಮಶಾಸ್ತ್ರಗಳಲ್ಲಿ ನಮೂದಿಸಿರುವ ದಿಕ್ಪಾಲಕರೇ ಮೊದಲಾದ ದೇವದೇವತೆಗಳು ಅವರ ಧರ್ಮಪತ್ನಿಯರೊಡಗೂಡಿ ಅವರವರ ವಾಹನಗಳ ಮೇಲೆ ಕುಳಿತಿರುವ ಶಿಲ್ಪಗಳು; ಮಾನವನ ವಿಗ್ರಹಗಳು, ಇದರಲ್ಲಿ ಸಾಮಾನ್ಯವಾದ ಮನೆಯ ಚಿತ್ರಗಳು ಅವರ ಆಟಪಾಠಗಳು, ಪೂಜಾವಿಧಾನಗಳು, ಸಂಗೀತ ಮತ್ತು ನೃತ್ಯ ಪ್ರದರ್ಶನದ ಚಿತ್ರಗಳು, ವ್ಯಾಖ್ಯಾನ, ತೀರ್ಥಯಾತ್ರೆ, ವೈರಿಯೊಡನೆ ಯುದ್ಧ, ಹಿರಿಯರಿಗೆ ಸೇವೆ ಮಾಡುತ್ತಿರುವುದು, ಮೆರವಣಿಗೆಗಳು, ಆಲಸಕನ್ಯೆಯರು, ಅಭಿಸಾರಿಕೆಯರು ಇವೇ ಮೊದಲಾದ ಶಿಲ್ಪಗಳು, ಪಕ್ಷಿಗಳು, ಕಾಡುಪ್ರಾಣಿಗಳು, ನೀರುಪ್ರಾಣಿಗಳು, ಪುರಾಣಗಳಲ್ಲಿ ನಮೂದಿಸಿರುವಂಥ ಕೆಲವು ಪ್ರಾಣಿಗಳು, ನಾಗನಾಗಿಣಿಯರು, ಅಂತವಿಲ್ಲದೆ ಹರಡಿರುವ ಬಳ್ಳಿಗಳು, ಮರಗಳು, ಭೌಗೋಳಿಕ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳಿವೆ.

	ಮೊದಲಿನ ದೇವಾಲಯಗಳಾದ ಪರಶುರಾಮೇಶ್ವರ, ಸ್ವರ್ಣಜಾಲೇಶ್ವರ ಮತ್ತು ಶತೃಘ್ನೇಶ್ವರ ದೇವಾಲಯಗಳಲ್ಲಿ ಕಡೆಯಲ್ಪಟ್ಟಿರುವ ಶಿಲ್ಪಗಳು ಬಹಳ ಸರಳವಾದ ಶೈಲಿಯಿಂದ ಕೂಡಿದ್ದು ತಮ್ಮ ಪ್ರಾಕೃತಿಕ ಲಕ್ಷಣಗಳನ್ನು ತೋರುವಂಥವುಗಳಾಗಿದ್ದು ಕಥಾನಕ ಕಲೆಗಳಿಂದ ಕೂಡಿವೆ. ಮದುವೆಯ ಮೆರವಣಿಗೆ (ಮುಖ್ಯವಾಗಿ ಶಿವನ ಮದುವೆಯ ಮೆರವಣಿಗೆ), ಬಂಗಾರದ ಜಿಂಕೆಯನ್ನು ಸಂಹರಿಸುತ್ತಿರುವ ಶ್ರೀರಾಮ, ಕಿರಾತಾರ್ಜುನೀಯ, ಅನ್ನಪೂರ್ಣೆಯಿಂದ ಭಿಕ್ಷೆ ಪಡೆಯುತ್ತಿರುವ ಶಿವ, ಕೈಲಾಸ ಎತ್ತುತ್ತಿರುವ ರಾವಣ ಇವೇ ಮೊದಲಾದ ಕಥಾನಕ ಶಿಲ್ಪಗಳು ಆಲಯಗಳ ಸೌಂದರ್ಯ ವೃದ್ಧಿಗೆ ಸಾಕಷ್ಟು ನೆರವಾಗುತ್ತವೆ.  ಉಬ್ಬು ಚಿತ್ರಗಳು, ಅಷ್ಟಾಗಿ ಉಬ್ಬಿನಿಂದ ಕೂಡಿರದೆ ಹೋದರೂ ಅಲ್ಲಿ ಬಿಡಿಸಿರುವ ಸರಳ ರೇಖೆಗಳಿಂದಲೂ ಅಂಗಾಂಗಗಳ ಬೆಳೆವಣಿಗೆಯನ್ನು ಹಿತವಾಗಿ ತೋರಿಸುವುದರಿಂದಲೂ ಪೂರ್ಣ ರೂಪದಲ್ಲಿ ಚಿತ್ರಿತವಾದ ಶಿಲ್ಪಗಳಂತೆ ಕಂಡು ಬರುತ್ತವೆ.  ಇವು ಸಾಮಾನ್ಯವಾದ ಭಿತ್ತಿಶಿಲ್ಪದಷ್ಟು ಉಬ್ಬುಕೆತ್ತನೆಗಳಲ್ಲ.  ಅಲ್ಲಿರುವ ಅಲಂಕಾರಗಳು ಇವುಗಳಲ್ಲಿ ಇಲ್ಲ.  ದೃಶ್ಯಸಂಯೋಜನೆ ಮತ್ತು ಸರಳತೆಗಾಗಿ ಇವು ಭಿತ್ತಿ ಚಿತ್ರಗಳಿಗಿಂತ ಎಷ್ಟೊ ಉತ್ತಮವಾಗಿವೆಯೆಂದು ಅನಿಸುತ್ತದೆ.

	ಮುಂದುವರಿಯುತ್ತ ವೈತಾಲ, ಶಿಶಿರೇಶ್ವರ ಮತ್ತು ಮಾರ್ಕೆಂಡೇಶ್ವರ ದೇವಲಯಗಳಲ್ಲಿ ಉಬ್ಬನ್ನು ತೋರಿಸುವ ಆಳ, ಕಲೆಯಲ್ಲಿ ಅನುಭವದಿಂದ ಬಂದಂಥ ನಿಪುಣತೆ, ಹೆಚ್ಚು ಕುಶಲಕಲೆಯನ್ನು ರೂಪಿಸಿರುವುದು ಕಾಣುತ್ತದೆ.  ವಿಗ್ರಹಗಳ ಮುಖ ಭಾವದಲ್ಲಿ ತತ್ತ್ವಜಾÐನದಿಂದ ಉಂಟಾದ ಶಾಂತ ಸ್ವರೂಪವನ್ನು ಬಹಳ ನಾಜೂಕಾಗಿ ತೋರಿಸಲಾಗಿದೆ.  ಅನುಭವದಿಂದ ಉಂಟಾದ ಕಲೆಯ ಮೇಲಿನ ಹಿಡಿತವನ್ನು ಬೇರೆ ನಾಜೂಕಾದ ಕಲೆ ವಿನ್ಯಾಸಗಳಲ್ಲಿ ಕಾಣಬಹುದು.

	ರಾಜಾರಾಣಿ, ಬ್ರಹ್ಮೇಶ್ವರ ಮತ್ತು ಲಿಂಗರಾಜದೇವಾಲಯಗಳಲ್ಲಿ ಈ ಕಲೆ ನೈಪುಣ್ಯದ ಶೀಖರ ಮುಟ್ಟಿದೆ.  ಬಹಳ ನಾಜೂಕಾಗಿ ಕೆತ್ತಲ್ಪಟ್ಟಿರುವ ಪ್ರಣಯ ಪ್ರಧಾನವಾದ ಉನ್ಮತ್ತರಾಗಿರುವಂಥ ಮದನಿಕೆ ವಿಗ್ರಹಗಳನ್ನು ಕಾಣಬಹುದು.  ಎಲೆ ಬಳ್ಳಿಗಳಿಂದ ಅಲಂಕೃತವಾದ ತೆಳುವಾದ ತುಂಬು ಉಬ್ಬು ಚಿತ್ರಗಳು ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ವಿಗ್ರಹಗಳು, ಮಗುವನ್ನು ಲಾಲಿಸುತ್ತಿರುವ ತಾಯಿ, ಪ್ರೀತಿಯಿಂದ ಸಾಕಿರುವ ಪ್ರಾಣಿಗಳ ಜೊತೆಯಲ್ಲಿ ಆಡುತ್ತಿರುವ ಸುಂದರಿ, ನಡೆಯುವಾಗ ಶಬ್ದವಾಗದೆ ಇರಲಿ ಎಂಬ ಉದ್ದಿಶ್ಯದಿಂದ ಕಾಲಿನ ಗೆಜ್ಜೆಯನ್ನು ತೆಗೆಯುತ್ತಿರುವ ನಾರಿ, ನೃತ್ಯಗಾರ್ತಿಯರು, ಹಲವಾರು ರೀತಿಯ ಸಂಗೀತವಾದ್ಯಗಳನ್ನು ನುಡಿಸುತ್ತಿರುವ ವಿದ್ವಾಂಸರು, ಬಾಗಿಲಿನ ಬದಿಯಲ್ಲಿ ನಿಂತಿರುವ ಅಭಿಸಾರಿಕೆ, ರತಿಕ್ರೀಡೆಯಲ್ಲಿ ಉನ್ಮತ್ತರಾಗಿರುವ ಪ್ರಣಯ ಜೋಡಿಗಳು ಮೊದಲಾದ ಶಿಲ್ಪಗಳಿಂದ ಅಲಂಕೃತವಾದ ಭಿತ್ತಿಗಳನ್ನು ಕಾಣಬಹುದು.

	ತದನಂತರ ಬೆಳಕಿಗೆ ಬಂದ ಅನಂತವಾಸುದೇವ, ಸಾರಿದೆ ವುಲ್ ಮತ್ತು ಯಮೇಶ್ವರ ದೇವಾಲಯಗಳಲ್ಲಿ ಅಲಂಕಾರಿಕ ಕಲೆ ಬಹಳ ಮುಂದುವರಿದಿದ್ದು ಹೆಚ್ಚು ಆಭರಣಗಳಿಂದ ಕೂಡಿದ್ದು ಕಲೆಯ ಅವನತಿಯನ್ನು ಸೂಚಿಸುತ್ತದೆ.  ಪಾಪನಾಶಿನಿಕೆರೆಯ ದಂಡೆಯ ಮೇಲೆ ದೇವಾಲಯಗಳನ್ನು ಕಟ್ಚಿದಾಗ ಕಲೆಯ ಬೆಳೆವಣಿಗೆಯಲ್ಲಿದ್ದ ಕ್ರಿಯಾಶಕ್ತಿ ಪೂರ್ಣವಾಗಿ ಮುಗಿದಿರುವಂತೆ ಕಾಣುತ್ತದೆ.

	ಸಾಮಾನ್ಯವಾಗಿ ಎಲ್ಲ ದೇವಾಲಯಗಳಂತೆ ಭುವನೇಶ್ವರ ದೇವಾಲಯಗಳಲ್ಲಿ ಬರುವ ವಿಗ್ರಹಗಳೂ ವೇದ, ಪುರಾಣ, ರಾಮಾಯಣ, ಮಹಾಭಾರತಗಳನ್ನೇ ಅನುಸರಿಸಿವೆ.  ಪ್ರತಿಮಾಲಕ್ಷಣವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಈ ದೇವಾಲಯಗಳಲ್ಲಿ ವಿಗ್ರಹಗಳ ಉಗಮ ಮತ್ತು ಅನುಚಾನವಾಗಿ ನಡೆದುಬಂದ ಬೆಳಿವಣಿಗೆಯನ್ನು ಕಾಣಬಹುದು. ಹಲವು ದಂತ ಕಥೆಗಳೂ ಈ ವಿಗ್ರಹಗಳ ನಿರ್ಮಾಣಕ್ಕೆ ಅವಕಾಶಮಾಡಿಕೊಟ್ಟಿವೆ.  ಹೀಗಾಗಿ ಪಾಶ್ರ್ವದೇವತೆಯಾಗಿ ಸ್ಥಾನಪಡೆದಿರುವ ಕಾರ್ತಿಕೇಯನ ಎಂಟು ಬೇರೆ ಬೇರೆ ರೀತಿಯ ವಿಗ್ರಹಗಳನ್ನು ಇಲ್ಲಿ ಕಾಣಬಹುದು.  ಹಲವು ಹಳೆಯ ದೇವಾಲಯಗಳಲ್ಲಿ ನವಗ್ರಹಗಳಲ್ಲಿ ಕೇತುವನ್ನು ತೋರಿಸಿಲ್ಲ (ಪರಶುರಾಮೇಶ್ವರ ದೇವಾಲಯ).  ಮೊದಲಿಗೆ ಅಷ್ಟಗ್ರಹಗಳನ್ನು ಮಾತ್ರ ಕಾಣಬಹುದು.  ಅನಂತರದಲ್ಲಿ ಕೇತುವನ್ನು ಒಂಬತ್ತನೆಯ ಗ್ರಹವಾಗಿ ಅಳವಡಿಸಿಕೊಳ್ಳಲಾಗಿದೆ.  ಇದನ್ನು ಮುಕ್ತೇಶ್ವರ ದೇವಾಲಯದಲ್ಲಿ ಕಾಣಬಹುದು.  ಮತ್ತೆ ಮೊದಮೊದಲಿನ ದೇವಾಲಯಗಳಲ್ಲಿ ಅಷ್ಟ ದಿಕ್ಪಾಲಕರು ಸ್ಥಳವನ್ನು ಪಡೆದಿಲ್ಲ.  ಆದರೆ ತದನಂತರ ಕಟ್ಟಿದ ರಾಜಾರಾಣಿ, ಲಿಂಗರಾಜ, ಬ್ರಹ್ಮೇಶ್ವರ ಮತ್ತು ಮೇಘೇಶ್ವರ ದೇವಾಲಯಗಳಲ್ಲಿ ಈ ವಿಗ್ರಹಗಳನ್ನು ಕಾಣಬಹುದು.  ಅನಂತರ ನಿರ್ಮಿಸಲಾದ ಅನಂತವಾಸುದೇವ, ಗೌರಿದೇವುಲ್, ಯಮೇಶ್ವರ ಮೊದಲಾದ ದೇವಾಲಯಗಳಲ್ಲಿ ಅಷ್ಟದಿಕ್ಪಾಲಕರನ್ನು ಅವರವರ ಪತ್ನಿಸಮೇತರಾಗಿ ಚಿತ್ರಿಸಲಾಗಿದೆ.

	ಮೊದಲು ಕಟ್ಟಿದ ದೇವಾಲಯಗಳಲ್ಲಿ ಪರಶುರಾಮೇಶ್ವರ ಚಿಕ್ಕದಾದರೂ ಸುಂದರವಾಗಿದೆ.  ಈ ದೇವಾಲಯವನ್ನು ಕ್ರಿ.ಶ.  ಏಳನೆಯ ಶತಮಾನದಲ್ಲಿ ಕಟ್ಟಿರುವರೆಂದು ಹೇಳುತ್ತಾರೆ.  ಇದರಲ್ಲಿ ಅಷ್ಟಗ್ರಹಗಳನ್ನು ಮಾತ್ರ ಕಾಣಬಹುದು.  ಇದು ಒಂದು ಚತುರಸ್ರಾಕಾರದ ಗರ್ಭಗೃಹ ಮತ್ತು ಆಯತಾಸ್ರದ ಜಗಮೋಹನದಿಂದ ಕೂಡಿದೆ.

	ಎಲ್ಲ ರೀತಿಯಲ್ಲಿಯೂ ಪರಶುರಾಮೇಶ್ವರ ದೇವಾಲಯದಂತಿರುವ ಸ್ವರ್ಣ ಜಾಲೇಶ್ವರ ಮಂದಿರ ಈ ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ದಕ್ಷಿಣಕ್ಕಿರುವ ಕೋಟಿತೀರ್ಥ ಪುಷ್ಕರಣಿಯ ಸಮೀಪದಲ್ಲಿದೆ.  ಲಕ್ಷ್ಮಣೇಶ್ವರ, ಭರತೇಶ್ವರ ಮತ್ತು ಶತೃಘ್ನೇಶ್ವರ ದೇವಾಲಯಗಳ ಗುಂಪು ರೈಲ್ವೆ ನಿಲ್ದಾಣದಿಂದ ಲಿಂಗರಾಜ ದೇವಾಲಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಒಂದೇ ಸಾಲಿನಲ್ಲಿ ಕಟ್ಟಲಾಗಿದೆ.  ಇವೆಲ್ಲ ಕ್ರಿ.ಶ. ಸು. ಆರನೆಯ ಶತಮಾನದ ಅಂತ್ಯ ಮತ್ತು ಏಳನೆಯ ಶತಮಾನದ ಆದಿಭಾಗದಲ್ಲಿ ನಿರ್ಮಿಸಿದ್ದು ಇಲ್ಲಿಯ ಅತ್ಯಂತ ಹಳೆಯ ದೇವಾಲಯಗಳಾಗಿವೆ.  ಅಲ್ಲದೆ ಮೋಹಿನಿ, ಉತ್ತರೇಶ್ವರ, ಗೌರಿಶಂಕರ, ಗಣೇಶ, ಪಶ್ಚಿಮೇಶ್ವರ, ಶಿಶಿರೇಶ್ವರ, ಮಾರ್ಕಂಡೇಶ್ವರ ದೇವಾಲಯಗಳೂ ಈ ಗುಂಪಿಗೆ ಸೇರಿದವು.

	ಮುಕ್ತೇಶ್ವರ ದೇವಾಲಯ ಮೇಲೆ ಹೇಳಿರುವ ದೇವಾಲಯಗಳ ಕೊನೆಯ ಕಾಲದಲ್ಲಿ ಕಟ್ಟಿದ್ದು. ಇದು ಪಶ್ಚಿಮಾಭಿಮುಖವಾಗಿದ್ದು ಭುವನೇಶ್ವರದ ದೇವಾಲಯಗಳ ಬೆಳೆವಣಿಗೆಯಲ್ಲಿ ಒಂದು ಮೈಲಿಗಲ್ಲಾಗಿ ನಿಂತಿದೆ.

	ಇದರ ಎತ್ತರ ಅಗಾಧವಾಗಿದ್ದು ಈ ಪ್ರದೇಶದ ದೇವಾಲಯಗಳಲ್ಲಿ ಅತಿ ಉನ್ನತವಾದುದಾಗಿದೆ.  ಒರಿಸ್ಸಾದ ವಾಸ್ತುಶಿಲ್ಪ ಮತ್ತು ಕಲೆಯಲ್ಲಿ ಹೆಸರಿಸಿರುವ ಎಲ್ಲ ರೀತಿಯ ಕಲಾಕೃತಿಗಳೂ ಈ ದೇವಾಲಯದಲ್ಲಿ ಕಾಣಸಿಗುತ್ತವೆ.  ಇದು ಭುವನೇಶ್ವರದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಒಂದು ಮಾದರಿಯೇ ಆಗಿದೆ.

	ಬಿಂದು ಸರೋವರದ ಪೂರ್ವಕ್ಕೆ ನಿಂತಿರುವ ಅನಂತವಾಸುದೇವ ದೇವಾಲಯವೊಂದೇ ಇಲ್ಲಿ ವೈಷ್ಣವಧರ್ಮದ ಪ್ರತೀಕ.  ಇದರ ಹೊರಭಿತ್ತಿಗಳು ಶಿಲ್ಪಾಕೃತಿ ಮತ್ತು ಹಲವಾರು ಆಲಂಕಾರಿಕ ಕೃತಿಗಳಿಂದ ಕಂಗೊಳಿಸುತ್ತವೆ.  ಇವುಗಳಲ್ಲಿ ಕೃಷ್ಣ, ಬಲರಾಮ ಮತ್ತು ಸುಭದ್ರೆಯರ ವಿಗ್ರಹಗಳಿವೆ.  ಈ ದೇವಾಲಯವನ್ನು ಅನಂಗಭೀಮನ ಮಗಳಾದ ಚಂದ್ರಾದೇವಿ ಕ್ರಿ.ಶ. 1278ರಲ್ಲಿ ಬಲದೇವ (ಅನಂತ) ಸುಭದ್ರ ಮತ್ತು ಕೃಷ್ಣ (ವಾಸುದೇವ) ದೇವರುಗಳಿಗಾಗಿ ಕಟ್ಟಿಸಿದಳೆಂದು ಒಂದು ಶಿಲಾ ಶಾಸನದಿಂದ ತಿಳಿದುಬರುತ್ತದೆ
(ಸಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ